ನಿಕೊಬಾರ್ ದ್ವೀಪಗಳು
ಬಂಗಾಲ ಕೊಲ್ಲಿಯಲ್ಲಿರುವ ಭಾರತ ಒಕ್ಕೂಟ ಪ್ರದೇಶವಾದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳ ಭಾಗ. ಅಂಡಮಾನ್ ದ್ವೀಪಗಳಿಗೂ ಸುಮಾತ್ರ ದ್ವೀಪಕ್ಕೂ ನಡುವೆ ಇರುವ ನಿಕೋಬಾರ್ ದ್ವೀಪಗಳ ಸಂಖ್ಯೆ 58. ಇವುಗಳ ಪೈಕಿ ಕಾರ್ ನಿಕೋಬಾರ್ ದ್ವೀಪ ಉತ್ತರದಲ್ಲೂ ಮಹಾ ನಿಕೋಬಾರ್ ದ್ವೀಪ ದಕ್ಷಿಣದಲ್ಲೂ ಇವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾದ ಪೋರ್ಟ್ ಬ್ಲೇರ್‍ನಿಂದ ಸುಮಾರು 480 ಕಿಮೀ. ದೂರದಲ್ಲಿ ಮಹಾ ನಿಕೋಬಾರ್ ದ್ವೀಪವಿದೆ. ನಿಕೋಬಾರ್ ದ್ವೀಪಗಳ ಮುಖ್ಯ ರೇವು ನಾನ್‍ಕೌರಿ. ಇದು ಪೂರ್ವದ ಅತ್ಯುತ್ಕøಷ್ಟ ರೇವು ಎನಿಸಿದೆ.

    ನಿಕೋಬಾರ್ ದ್ವೀಪಗಳ ವಿಸ್ತೀರ್ಣ 1953 ಕಿಮೀ. ಕಾರ್ ನಿಕೋಬಾರ್ ತಹಸೀಲಿನ ಜನಸಂಖ್ಯೆ 14,504; ನಾನ್‍ಕೌರಿಯದು 8,165 (1971). ಮಹಾ ನಿಕೋಬಾರ್ ದಕ್ಷಿಣದ ಅತ್ಯಂತ ದೊಡ್ಡ ದ್ವೀಪ. ವಿಸ್ತೀರ್ಣ 533 ಚ.ಕಿಮೀ. ಉತ್ತರದ ಗುಂಪಿನಲ್ಲಿ ಕಾರ್ ನಿಕೋಬಾರ್ ದ್ವೀಪವೇ ಪ್ರಮುಖವಾದ್ದು. ಇದರ ವಿಸ್ತೀರ್ಣ 69 ಚ.ಕಿಮೀ.

    ಮಹಾ ನಿಕೋಬಾರ್ ಸಮುದ್ರ ಮಟ್ಟದಿಂದ 647 ಮೀ. ಎತ್ತರದಲ್ಲಿದೆ. ಇದು ಸುಂದರವಾದ ಹಳ್ಳಿಗಳಿಂದಲೂ ತೊರೆಗಳಿಂದಲೂ ಶೋಭಿಸುತ್ತದೆ. ಇಲ್ಲಿ ಶುದ್ಧ ನೀರಿನ ಕೊರತೆ ಇಲ್ಲ. ಆದರೆ ಉಳಿದ ದ್ವೀಪಗಳಲ್ಲಿ ಇದು ದುರ್ಲಭ.

    ಭೌತಲಕ್ಷಣ : ಸಮುದ್ರದ ತಳದಲ್ಲಿ ಹಬ್ಬಿಸುವ ಪರ್ವತ ಶ್ರೇಣಿಯ ಕೆಲವು ಭಾಗಗಳು ನೀರಿನ ಮೇಲೆ ಎದ್ದು ಕಾಣುತ್ತವೆಯೆಂದೂ ಅವೇ ನಿಕೊಬಾರ್ ದ್ವೀಪಗಳೆಂದೂ ಅಭಿಪ್ರಾಯಪಡಲಾಗಿದೆ. ಇದು ಅಂಡಮಾನ್‍ನ ಮುಖಾಂತರ ಬರ್ಮದ ಆರಕಾನ್ ಯೋಮ ಶ್ರೇಣಿಯನ್ನೂ ಸುಮಾತ್ರದ ಪ್ರಮುಖ ಪರ್ವತ ಶ್ರೇಣಿಯನ್ನೂ ಕೂಡುತ್ತದೆ. ಈ ದ್ವೀಪಗಳು ಸುಮಾರು 15 ಕೋಟಿ ವರ್ಷಗಳ ಹಿಂದೆ ವಿಸ್ತಾರವಾದ ಭೂಭಾಗಗಳೊಂದಿಗೆ ಕೂಡಿಕೊಂಡಿದ್ದವು. ಕಾಲಕ್ರಮದಲ್ಲಿ ಭೂಗರ್ಭದ ಸ್ಥಿತ್ಯಂತರಗಳ ಮೂಲಕ ಆಗಿನ ವಿಸ್ತøತ ಭೂಪ್ರದೇಶ ಸಮುದ್ರದಲ್ಲಿ ಅಡಗಿ, ಎತ್ತರದ ಭಾಗಗಳು ಮಾತ್ರ ದ್ವೀಪಗಳಾಗಿ ನಿಂತಿವೆ. ಈ ದ್ವೀಪಗಳ ಭೂಸಂಶೋಧನೆ ಕ್ರಮಬದ್ಧವಾಗಿ ಇನ್ನೂ ನಡೆಯಬೇಕಾಗಿದೆ. 1846ರಲ್ಲಿ ಡೇನಿಷ್ ವಿಜ್ಞಾನಿಗಳೂ 1858ರಲ್ಲಿ ಆಸ್ಟ್ರಿಯನ್ ವಿಜ್ಞಾನಿಗಳೂ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಇಲ್ಲಿಯ ಶಿಲೆಗಳು ಬರ್ಮದ ಆರಕಾನ್ ಯೋಮ ಪರ್ವತಶ್ರೇಣಿಯ ಶಿಲೆಗಳನ್ನು ಹೋಲುತ್ತವೆಂಬುದನ್ನು ಭಾರತೀಯ ಭೂಗರ್ಭ ಸಂಶೋಧನ ತಂಡದವರು ಕಂಡುಕೊಂಡಿದ್ದಾರೆ. ಈ ಭಾಗ 1847ರಲ್ಲಿ ಹಾಗೂ 1881ರಲ್ಲಿ ಭೂಕಂಪಕ್ಕೆ ಈಡಾಗಿತ್ತು. ಅನಂತರ 1899ರಲ್ಲೂ ಇಲ್ಲಿ ಲಘು ಕಂಪನವಾಗಿತ್ತು. ನಿಕೋಬಾರ್ ದ್ವೀಪಗಳು ಭಾಗಶಃ ಬೆಟ್ಟಗುಡ್ಡಗಳಿಂದ ಕೂಡಿವೆ. ಉಳಿದ ಭಾಗ ಸಮತಲವಾದ್ದು.

   ವಾಯುಗುಣ: ಸಮಭಾಜಕ ವೃತ್ತದ ಉತ್ತರಕ್ಕೆ 0 ಡಿಗ್ರಿಯಿಂದ 10 ಡಿಗ್ರಿಯವರೆಗೆ ಹಬ್ಬಿರುವ ಈ ದ್ವೀಪಗಳಲ್ಲಿ ಸಮಭಾಜಕೀಯ ವಾಯುಗುಣ ಇದೆ. ಇಲ್ಲಿ ಉಷ್ಣತೆ 18 ಡಿಗ್ರಿಯಿಂದ 33 ಡಿಗ್ರಿವರೆಗೆ ಇರುತ್ತದೆ. ಎರಡೂ ಬಗೆಯ ಮಾನ್ಸೂನ್‍ಗಳೂ ಬೀಸಿ ಮಳೆ ಸುರಿಸುತ್ತವೆ. ಮಧ್ಯಾಹ್ನದ ಮೇಲೆ ಸಾಮಾನ್ಯವಾಗಿ ಮಳೆ ಬೀಳುತ್ತದೆ. ವರ್ಷಕ್ಕೆ 2,286 ಮಿಮೀ. 3,420 ಮಿಮೀ. ಮಳೆಯಾಗುತ್ತದೆ. ಮಾಧ್ಯ ಉಷ್ಣತೆ ವರ್ಷವೆಲ್ಲ ಒಂದೇ ಸಮನಾಗಿರುವುದರಿಂದ ಖಚಿತವಾದ ಋತುಮಾನಗಳನ್ನು ಈ ಪ್ರದೇಶದಲ್ಲಿ ಗುರುತಿಸುವುದು ಕಷ್ಟ. ಫೆಬ್ರವರಿ, ಮಾರ್ಚ್, ಏಪ್ರಿಲ್ ಹಾಗೂ ಅಕ್ಟೋಬರ್ ತಿಂಗಳುಗಳು ಬಹಳ ಹಿತವಾಗಿರುತ್ತವೆ.

   ಸಸ್ಯಪ್ರಾಣಿವರ್ಗ : ಇಲ್ಲಿ ಸಮಭಾಜಕೀಯ ಅರಣ್ಯಗಳಿವೆ. ಪಾಡೌಕ್ ಗುರ್ಗಾನ್, ಚುಗಲಮ್, ಪಾಪಿಟ ಇವು ಮುಖ್ಯ ಮರಗಳು. ಇವುಗಳಲ್ಲಿ ಕೆಲವು ಮರಗಳು ಚೌಬೀನೆಗೆ ಉಪಯುಕ್ತವಾಗಿವೆ. ತೆಂಗು, ಅಡಕೆ, ಪ್ಯಾಂಡನಸ್ ಲೆರಮ್ ಮೊದಲಾದವು ಬೆಳೆಯುತ್ತವೆ.

    ಇಲ್ಲಿ ನೈಸರ್ಗಿಕ ಪ್ರಾಣಿಗಳು ಹೆಚ್ಚಾಗಿಲ್ಲ. ದಕ್ಷಿಣಾಂತ ದ್ವೀಪಗಳಲ್ಲಿ ಏಡಿಗಳನ್ನು ತಿನ್ನುವ ಮಂಗ, ಇಲಿಗಳು, ಕಾಡು ಇಲಿಗಳು, ಬಾವಲಿಗಳು, ಹುಳು ಹುಪ್ಪಡಿಗಳನ್ನು ತಿಂದು ಜೀವಿಸುವ ಸಸ್ತನಿಯಂಥ ಉದ್ದಮೂತಿಯ ಇಲಿಗಳು ಮೊದಲಾದವು ಇವೆ. ಸಾಧು ಪ್ರಾಣಿಗಳಾದ ಆಕಳು, ಎತ್ತು ಮೊದಲಾದವನ್ನು ತಂದು ಇಲ್ಲಿ ಬಿಟ್ಟರೆ ಅವು ಶೀಘ್ರದಲ್ಲೇ ದುಷ್ಟಪ್ರವೃತ್ತಿಗೆ ಇಳಿಯುತ್ತವೆಂದು ಕೆಲವರ ನಂಬಿಕೆ.

    ಭಾರತದ ಇತರ ಭಾಗಗಳಲ್ಲಿರುವ ಪಕ್ಷಿಗಳು ನಿಕೋಬಾರ್ ದ್ವೀಪಗಳಲ್ಲೂ ಇವೆ. ಗುಬ್ಬಿ ಜಾತಿಯ ಹಕ್ಕಿಗಳೂ ವಿವಿಧ ವರ್ಣಮಯವಾದ ಗುಂಜುರೆಕ್ಕೆಯ ಕಾಡುಪಾರಿವಾಳಗಳೂ ಚಿಕ್ಕ ಗಿಳಿಗಳೂ ಕಪ್ಪುಮಿಶ್ರಿತ ಬಂಗಾರದ ಬಣ್ಣದ ರೆಕ್ಕೆಗಳ ಕಾಗೆಗಳೂ ಇಲ್ಲಿಯ ವೈಶಿಷ್ಟ್ಯ. ನಾನಾ ಬಗೆಯ ಚಿಟ್ಟೆಗಳೂ ಚಿತ್ರವಿಚಿತ್ರ ಹುಳು ಹುಪ್ಪಡಿಗಳೂ ಇವೆ. ಇವಲ್ಲದೆ ಹಾವು, ಮೊಸಳೆ, ಊಸರವಳ್ಳಿ, ಸುಮಾತ್ರ ಜಾತಿಯ ಸಿಹಿನೀರು ಮೀನು ಇಲ್ಲಿ ಹೇರಳವಾಗಿವೆ.

   ಇತಿಹಾಸ : ಪ್ರಾಚೀನ ಕಾಲದಿಂದಲೂ ಬೇರೆ ಬೇರೆ ಭೂಖಂಡಗಳವರು ಈ ದ್ವೀಪಗಳ ಮಾರ್ಗವಾಗಿ ಸರಕುಗಳನ್ನು ವ್ಯಾಪಾರಕ್ಕಾಗಿ ಸಾಗಿಸುತ್ತಿದ್ದರು. 17ನೆಯ ಶತಮಾನದಿಂದ ವಿವಿಧ ಕಾಲಗಳಲ್ಲಿ ಹಲವು ಐರೋಪ್ಯ ದೇಶಗಳು ಇಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದ್ದವು. 1869ರಲ್ಲಿ ಡಚ್ಚರು ಸಂಪೂರ್ಣವಾಗಿ ಈ ದ್ವೀಪಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟರು. ಉತ್ತರಕ್ಕೆ ಕಾರ್ ನಿಕೋಬಾರ್ ಮತ್ತು ಮಧ್ಯದಲ್ಲಿ ಕೆಮೋರ್ಟ ಬಂದರುಗಳು ಅಭಿವೃದ್ಧಿ ಹೊಂದಿದುವು.

    1942ರಲ್ಲಿ ಎರಡನೆಯ ಮಹಾಯುದ್ಧರ ಕಾಲದಲ್ಲಿ ನಿಕೋಬಾರ್ ದ್ವೀಪಗಳು ಜಪಾನೀಯರ ವಶಕ್ಕೆ ಬಂದವು. ಆಗ ಅವರು ಕಾರ್ ನಿಕೋಬಾರ್ ರೇವನ್ನು ನೌಕಾನೆಲೆಯಾಗಿ ಬಳಸಿಕೊಂಡಿದ್ದರು. ಅದು ಸಾಕಷ್ಟು ಅಭಿವೃದ್ಧಿ ಹೊಂದಿತು. ಈ ಭಾಗ ಜಪಾನೀ ಸೈನ್ಯದ ವಶದಲ್ಲಿ 1945ರವರೆಗೆ ಇತ್ತು. ಈ ಅವಧಿಯಲ್ಲಿ ಈ ದ್ವೀಪವಾಸಿಗಳನ್ನು ಅವರು ಬಹು ಕ್ರೂರವಾಗಿ ನಡೆಸಿಕೊಂಡರು. ಅಷ್ಟೇ ಅಲ್ಲ, ಅವರ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದರು. ತೆಂಗಿನ ಹಾಗೂ ಅಡಕೆಯ ತೋಟಗಳು ಹಾಳಾದವು.

   ಜಪಾನಿನ ಪರಾಜಯದೊಂದಿಗೆ ಈ ದ್ವೀಪಗಳು ಮತ್ತೆ ಬ್ರಿಟಿಷರ ಸ್ವಾಧೀನಕ್ಕೆ ಬಂದುವು. ಆಗಸ್ಟ್ 15ರಂದು ಭಾರತದೊಂದಿಗೆ ಇವು ಸ್ವತಂತ್ರವಾದುವು. ಈಗ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತ ಒಕ್ಕೂಟ ಪ್ರದೇಶ.

   ಜನಜೀವನ : ನಿಕೋಬಾರ್ ದ್ವೀಪಗಳವರು ಬರ್ಮೀ ಮತ್ತು ಮಲಯ ಸಂಮಿಶ್ರ ತಲೈಂಗ್ ಜನ. ಇವರು ಸಾಮಾನ್ಯ ಎತ್ತರದ ದೃಢಕಾಯರು; ಗುಂಗುರು ಕೂದಲು, ಮೋಟು ತಲೆ, ಸಣ್ಣಮುಖ ಉಳ್ಳವರು. ಈ ಪ್ರದೇಶದಲ್ಲಿ ಆಸ್ಟ್ರಿಕ್ ಗುಂಪಿನ ಅನೇಕ ಉಪಭಾಷೆಗಳು ಪ್ರಚಾರದಲ್ಲಿವೆ. ಇವನ್ನು ನಿಕೋಬಾರಿ ಭಾಷೆಗಳೆಂದು ಕರೆಯುತ್ತಾರೆ.

   ಇಲ್ಲಿ ಹಳ್ಳಿಯೇ ಮೂಲ ಘಟಕ. ಅನುವಂಶಿಕವಾಗಿ ಬಂದ ಹಿರಿಯರೇ ಆಯಾ ಹಳ್ಳಿಗಳ ಹಿರಿತನವನ್ನು ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ನ್ಯಾಯ ನಿರ್ಣಯ ಸಾರ್ವಜನಿಕ ಅಭಿಪ್ರಾಯವನ್ನು ಅವಲಂಬಿಸಿವೆ. ಭೂಮಿ ಇಲ್ಲಿ ಸಮಾಜದ ಸೊತ್ತು. ಆದರೆ ತೆಂಗಿನ ಹಾಗೂ ಹಣ್ಣಿನ ಗಿಡಗಳ ಮೇಲೆ ವ್ಯಕ್ತಿ ತನ್ನ ಸ್ವಾಮ್ಯವನ್ನು ಇಟ್ಟುಕೊಳ್ಳಬಹುದು.

    ಸ್ತ್ರೀಯರ ಸ್ಥಾನ ಸಮಾಜದಲ್ಲಿ ಗೌರವಾನ್ವಿತವಾದ್ದು. ಅವರಿಗೆ ಆಸ್ತಿಯ ಹಕ್ಕುಂಟು; ತಮ್ಮ ಗಂಡಂದಿರನ್ನು ಆಯ್ದುಕೊಳ್ಳುವಲ್ಲಿ ಅವರು ಪೂರ್ಣ ಸ್ವತಂತ್ರರು. ಇಲ್ಲಿ ಮದುವೆಯ ಬಂಧನ ಬಹಳ ಬಿಗಿಯಾಗಿಲ್ಲ. ದಾಂಪತ್ಯದಲ್ಲಿ ಕಿಂಚಿತ್ ವಿರಸ ಬಂದರೂ ಅವರು ಸುಲಭವಾಗಿ ಬಿಡುಗಡೆ ಹೊಂದಬಹುದು. ಶ್ರೀಮಂತ ಕುಟುಂಬಗಳಲ್ಲಿ ಮಾತ್ರ ಬಹುಪತ್ನಿತ್ವ ಇದೆ.

    ಇಲ್ಲಿಯ ಜನರ ಸಂಸ್ಕøತಿ ಎತ್ತರಮಟ್ಟದ್ದು . ಇಲ್ಲಿ ಸೇಡಿಗೆ ಸೇಡು ಎಂಬ ಮಾತೇ ಇಲ್ಲ. ಅಕಸ್ಮಾತ್ ಯಾವುದೋ ಪ್ರಸಂಗದಲ್ಲಿ ಯಾರಿಂದಲಾದರೂ ನೋವಾದರೆ, ಅಪಮಾನವಾದರೆ, ತೊಂದರೆಗೀಡಾದ ವ್ಯಕ್ತಿ ತನಗಾದ ನೋವು ಅಪಮಾನಗಳನ್ನು ಅಭಿವ್ಯಕ್ತಗೊಳಿಸಲು ಬೆರಳು ಕಚ್ಚುತ್ತಾನೆ. ಅವನು ಎದುರಾಳಿಗೆ ಏನೂ ಅಪಾಯ ಮಾಡದೆ ತಾನೇ ತನ್ನ ಆಸ್ತಿಪಾಸ್ತಿಗಳನ್ನು ನಾಶಮಾಡಿಬಿಡುತ್ತಾನೆ. ತನ್ನ ಅಂಗಾಂಗಗಳನ್ನು ಊನ ಮಾಡಿಕೊಳ್ಳುವುದಕ್ಕೂ ಅವನು ಹಿಂದುಮುಂದು ನೋಡುವುದಿಲ್ಲ. ಇದರಿಂದ ಎದುರಾಳಿ ನಾಚಿಕೆಯಿಂದ ಪಶ್ಚಾತ್ತಾಪಗೊಂಡು ತನ್ನ ತಪ್ಪನ್ನು ತಾನೇ ತಿದ್ದಿಕೊಂಡು ಮಾನವನಾಗಲು ಸಾಧ್ಯವಾಗುತ್ತದೆಯೆಂದು ನಂಬಲಾಗಿದೆ. ಇವರ ಉಡುಗೆ ತೊಡುಗೆಗಳಲ್ಲಿ ಆಡಂಬರವಿಲ್ಲ. ಇವರು ಮರ್ಯಾದೆಗೆ ಅಗತ್ಯವಾದಷ್ಟು ಉದ್ದದ ಉಡುಪು ತೊಡುತ್ತಾರೆ. ಪುರುಷರು ಪಟ್ಟೆಗಳನ್ನೂ ಬಾಲವಿರುವ ಲಂಗೋಟಿಗಳನ್ನೂ ಧರಿಸುತ್ತಾರೆ. ಪಾಶ್ಚಾತ್ಯರೀತಿಯ ಉಡುಗೆ ತೊಡುಗೆಗಳನ್ನು ಧರಿಸುವ ರಿವಾಜು ಈಚೆಗೆ ಬರತೊಡಗಿದೆ. ಈ ದ್ವೀಪವಾಸಿಗಳ ಮನೆಗಳ ಆಕಾರ ಸ್ಥಳೀಯವಾಗಿ ವ್ಯತ್ಯಾಸವಾಗುತ್ತದೆ. ಇವರು ದಿನ್ನೆಗಳ ಮೇಲೆ ಕಂಬಗಳನ್ನು ನೆಟ್ಟು ತೆಂಗಿನ ಗರಿಗಳ ಚಾವಣಿ ಹೊದಿಸಿ ಮನೆ ನಿರ್ಮಿಸುತ್ತಾರೆ. ಮನೆಯ ಅಂಗಳದಲ್ಲಿ ಅಡಿಗೆಗಾಗಿ ಅಗ್ಗಿಷ್ಟಿಕೆ ಇರುತ್ತದೆ. ಕೆಲವು ಮನೆಗಳಲ್ಲಿ ಮಾತ್ರ ಪ್ರತ್ಯೇಕ ಅಡಿಗೆಮನೆಗಳು ಇರುವುದುಂಟು. ಕೆಲವು ಊರುಗಳಲ್ಲಿ ಸಾಮಾಜಿಕ ಹಬ್ಬಗಳಿಗಾಗಿಯೂ ಸಾಮೂಹಿಕ ಭೋಜನಗಳಿಗಾಗಿಯೂ ಸಾಮೂಹಿಕ ಸಭೆಗಳಿಗಾಗಿಯೂ ಪ್ರತ್ಯೇಕ ಮಂಟಪಗಳಿರುತ್ತವೆ.

    ಸಾಮಾನ್ಯವಾಗಿ ಬೆಳೆಯುವ ತೆಂಗೂ ನೈಸರ್ಗಿಕವಾಗಿ ಸಿಗುವ ಗೆಡ್ಡೆಗೆಣಸುಗಳೂ ಸುಲಭವಾಗಿ ಲಭಿಸುವ ಮೀನು, ಆಮೆ, ಪಾರಿವಾಳ, ಕಾಡುಹಕ್ಕಿ, ಮೊಲ ಮೊದಲಾದವೂ ಇಲ್ಲಿಯ ಜನರ ಆಹಾರ. ಇವರು ಹಕ್ಕಿ ಹೊಡೆಯಲು ಬಿಲ್ಲು ಬಾಣಗಳನ್ನೂ ಮೀನು ಹಿಡಿಯಲು ಈಟಿಬಲೆಗಳನ್ನೂ ಕಡಲಾಮೆ ಹಿಡಿಯಲು ಈಟಿ ಗಾಳಗಳನ್ನೂ ಉಪಯೋಗಿಸುತ್ತಾರೆ. ಜೇಡಿಮಣ್ಣಿನಿಂದ ಪಾತ್ರೆಗಳನ್ನು ಮಾಡುತ್ತಾರೆ.

    ದೇವರು ಕರುಣಾಮಯನೆಂಬುದು ಇಲ್ಲಿಯ ಜನರ ನಂಬಿಕೆ. ದೆವ್ವಭೂತಗಳಲ್ಲಿ ಇವರಿಗೆ ನಂಬಿಕೆ ಉಂಟು. ಕೆಲವು ದೆವ್ವಭೂತಗಳು ಕೆಲವರೊಡನೆ ಸ್ನೇಹ ವಿಶ್ವಾಸ ಪ್ರೀತಿಗಳಿಂದ ನಡೆದುಕೊಳ್ಳುತ್ತವೆ. ಇನ್ನು ಕೆಲವು ದೆವ್ವಭೂತಗಳು ಕೆಲವರೊಡನೆ ದುಷ್ಟಭಾವನೆಯಿಂದ ನಡೆದುಕೊಳ್ಳುತ್ತವೆ. ಇವು ರೋಗರುಜಿನಗಳನ್ನು ತರಬಲ್ಲವೆಂದು ಜನರ ನಂಬಿಕೆ. ದೆವ್ವಭೂತಗಳಲ್ಲಿರುವ ದುಷ್ಟಶಕ್ತಿಗಳನ್ನೂ ರೋಗರುಜಿನಗಳನ್ನು ತರುವ ಕೆಡುಕು ಗುಣಗಳನ್ನೂ ಮಂತ್ರಶಕ್ತಿಯಿಂದ ಗೊಂಬೆಯಲ್ಲಿ ಆಹ್ವಾನಿಸಿ ಅದನ್ನು ಪೂಜಿಸಿ ಸಮುದ್ರದಲ್ಲಿ ತೇಲಿಬಿಡುವ ಪದ್ಧತಿಯುಂಟು. ತಮ್ಮ ಪೂರ್ವಜರೇ ದೆವ್ವಭೂತಗಳಾಗಿರುತ್ತಾರೆಂದು ಇವರ ನಂಬಿಕೆ.

    ಮಹಾ ನಿಕೋಬಾರಿನ ನಡುವೆ ಇರುವ ಷಾಮ್‍ಪೆನ್‍ನಲ್ಲಿ ಪ್ರಾಚೀನ ವ್ಯವಸಾಯ ಪದ್ಧತಿಯನ್ನು ಇಂದಿಗೂ ಕಾಣಬಹುದು. ಅಲ್ಲಿಯ ಜನರು ಕೋಲಿನಿಂದ ನೆಲವನ್ನು ತೋಡಿ, ಬೀಜ ಬಿತ್ತಿ, ಗಿಡ ನೆಟ್ಟು ಹೊಲಗಳನ್ನೂ ತೋಟಗಳನ್ನೂ ಬೆಳೆಸುತ್ತಾರೆ. ಮರದ ಈಟಿಯನ್ನು ಬಳಸಿ, ನಾಯಿಗಳ ನೆರವಿನಿಂದ ಇವರು ಹಂದಿ ಮೊದಲಾದ ಪ್ರಾಣಿಗಳ ಬೇಟೆಯಾಡುತ್ತಾರೆ. ಈಚೆಗೆ ಈ ಜನರ ಮೇಲೆ ಕರಾವಳಿಯ ಜನರ ಗಾಢ ಪ್ರಭಾವ ಆಗತೊಡಗಿ ಇವರೂ ಪರಿವರ್ತನೆಗೆ ಒಳಗಾಗುತ್ತಿದ್ದಾರೆ.

   ಭಾರತದ ಸ್ವಾತಂತ್ರ್ಯಾನಂತರ ಈ ದ್ವೀಪಗಳು ಪ್ರಗತಿ ಹೊಂದುತ್ತಿವೆ. ರಸ್ತೆಗಳು ನಿರ್ಮಾಣವಾಗತೊಡಗಿ ಸಾರಿಗೆ ಸೌಲಭ್ಯ ಏರ್ಪಡುತ್ತಿದೆ. ಶಾಲೆಗಳು ಆರಂಭವಾಗಿವೆ. ಆಸ್ಪತ್ರೆಗಳು ಸ್ಥಾಪಿತವಾಗಿವೆ.     				      
   (ಪಿ.ಕೆ.ಯುಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ